ಕ್ರೈಸಾಪಿಡೀ
ಕೀಟವರ್ಗದ ನ್ಯೂರಾಪ್ಟರ ಗಣಕ್ಕೆ ಸೇರಿದ ಒಂದು ಕುಟುಂಬ.  ಇದಕ್ಕೆ ಸೇರಿದ ಕೀಟಗಳು ಸಸ್ಯಗಳಿಗೆ ಹಾನಿಯುಂಟು ಮಾಡುವ ಏಫಿಡ್ಡುಗಳನ್ನು ತಿಂದು ಜೀವಿಸುವುದರಿಂದ ಇವಕ್ಕೆ ಏಫಿಡ್ ಲಯನ್ಸ್ ಎಂಬ ಸಾಮಾನ್ಯ ಬಳಕೆಯ ಹೆಸರು ಬಂದಿದೆ.  ಆಕರ್ಷಕವಾದ ಮತ್ತು ಕೃಶವಾದ ದೇಹ, ಹಸಿರು ಬಣ್ಣದ ವೈವಿಧ್ಯಮಯ ವಿನ್ಯಾಸದಿಂದ ಕೂಡಿದ ಎರಡು ಜೊತೆ ರೆಕ್ಕೆಗಳು ಮತ್ತು ಸುಂದರವಾದ ಚಿನ್ನದ ಬಣ್ಣದ ಕಣ್ಣುಗಳು ಇವಕ್ಕೆ ಇರುವುದರಿಂದ ಇವುಗಳನ್ನು ಜರಿ ರೆಕ್ಕೆ ಕೀಟಗಳೆಂದೂ (ಲೇಸ್ ವಿಂಗ್ಸ್) ಕರೆಯುತ್ತಾರೆ.  ಕೆಲವು ಪ್ರಭೇದಗಳ ಕೀಟಗಳನ್ನು ಮುಟ್ಟಿದರೆ ದುರ್ವಾಸನೆ ಹೊರ ಸೂಸುತ್ತದೆ.  ಇದರಿಂದಾಗಿ ಇವನ್ನು ಸ್ಟಿಂಕ್‍ಫ್ಲೈಸ್ ಎಂದೂ ಕರೆಯಲಾಗುತ್ತದೆ.  ಸಾಮಾನ್ಯವಾಗಿ ಗಿಡಗಂಟೆಗಳಿಗೆ ಅಂಟಿಕೊಂಡೇ ವಾಸಿಸುತ್ತವೆ.  ಎರಡು ಜೊತೆ ರೆಕ್ಕೆಗಳಿದ್ದರೂ ಹಾರಲು ಹೆಚ್ಚು ಸಾಮಥ್ರ್ಯವಿಲ್ಲ.  ಈ ಕೀಟಗಳ ತಲೆ ಬಲು ಚಿಕ್ಕದು, ಕುಡಿ ಮೀಸೆಗಳು ಉದ್ದವಾಗಿಯೂ ತೆಳುವಾಗಿಯೂ ಇವೆ.  ಕೆಲವೊಮ್ಮೆ ಕುಡಿ ಮೀಸೆಗಳು ದೇಹಕ್ಕಿಂತ ಉದ್ದವಿರುವುದುಂಟು.  ವದನಾಂಗಗಳು ಆಹಾರವನ್ನು ಕಡಿಯುವುದಕ್ಕೆ ಅನುಕೂಲವಾಗಿವೆ.  ಎರಡು ಜೊತೆ ರೆಕ್ಕೆಗಳೂ ರಚನೆಯಲ್ಲಿ, ಆಕಾರದಲ್ಲಿ ಒಂದೇ ತೆರನಾಗಿವೆ.  ಮುಂದಿನ ಜೊತೆಯವು ಹಿಂದಿನ ಜೊತೆಯ ರೆಕ್ಕೆಗಿಂತ ಗಾತ್ರದಲ್ಲಿ ದೊಡ್ಡವು.  ಎರಡು ಜೊತೆಗಳು ಸಾಮಾನ್ಯವಾಗಿ ಪಾರದರ್ಶಕವಾಗಿವೆ.  ಕೆಲವು ಪ್ರಭೇದಗಳಲ್ಲಿ ಮಾತ್ರ ರೆಕ್ಕೆಗಳ ಮೇಲೆ ಅಲ್ಲಲ್ಲಿ ಮಾಸಲು ಛಾಯೆಗಳಿವೆ.

	ಕ್ರೈಸಾಪಿಡೀ ಕುಟುಂಬದ ಕೀಟಗಳು ಮರಗಿಡಗಳ ಕಾಂಡ ಮತ್ತು ಎಲೆಗಳ ಮೇಲೆ ಗುಂಪು ಗುಂಪಾಗಿ ಮೊಟ್ಟೆಯಿಡುತ್ತವೆ.  ಒಂದೊಂದು ಮೊಟ್ಟೆಗೂ ಉದ್ದವಾದ ಹಾಗೂ ತೆಳುವಾದ ತೊಟ್ಟು ಇದೆ.  ಡಿಂಬಗಳು ಕದಿರಿನಾಕಾರದವು.  ಇವಕ್ಕೆ ರಕ್ತ ಹೀರಲು ಸಹಾಯಕವಾಗಿರುವ ಕುಡುಗೋಲಿನ ಆಕಾರದ ವದನಾಂಗಗಳಿವೆ.  ತಂತುರೂಪದ ಕುಡಿ ಮೀಸೆಗಳು, ಕೃಶವಾದ ಕಾಲುಗಳು ಮತ್ತು ದೇಹದ ಎರಡು ಪಕ್ಕಗಳ ತಳಭಾಗದಲ್ಲಿ ಸಣ್ಣ ಸಣ್ಣ ಮುಳ್ಳುಗಳಂತಿರುವ ರಚನೆಗಳೂ ಇವಕ್ಕೆ ಉಂಟು.  ಇವುಗಳ ದೇಹ ಸಾಮಾನ್ಯವಾಗಿ ಬೂದಿ ಮಿಶ್ರಿತ ಕೆಂಪು, ಕಪ್ಪು, ಹಳದಿ ಬಣ್ಣಗಳಿಂದ ಕೂಡಿದೆ.  ಒಂದು ವಾರದ ಅನಂತರ ಡಿಂಬಗಳು ಮರಗಳಿಗೆ ಅಥವಾ ಇತರ ವಸ್ತುಗಳಿಗೆ ಅಂಟಿಕೊಂಡು ಬಿಳಿಯ ಬಣ್ಣದ ನಯವಾದ ರೇಶ್ಮೆಯಿಂದಾದ ಕೋಶಗಳಲ್ಲಿ ದೇಹವನ್ನು ಮುದುರಿಕೊಮಡು ಕೋಶಾವಸ್ಥೆಯನ್ನು ಸೇರುತ್ತವೆ.  ಡಿಂಬಗಳೂ ಪ್ರೌಢಕೀಟಗಳೂ ಇತರ ಕೀಟಗಳನ್ನು ತಿಂದು ಜೀವಿಸುತ್ತವೆ.

	ಕ್ರೈಸಾಪಿಡೀ ಕುಟುಂಬದ ಕೀಟಗಳು ಸಸ್ಯ ಪಿಡುಗುಗಳಾದ ಏಫಿಡ್ಡುಗಳು ಮತ್ತು ಇತರ ಹಾನಿಕರ ಕೀಟಗಳನ್ನು ತಿನ್ನುವುದರಿಂದ ಬಹಳ ಉಪಯುಕ್ತವೆನಿಸಿವೆ.  ಉದಾಹರಣೆಗೆ ಹತ್ತಿ ಮತ್ತು ಜೋಳದ ಪೈರಿಗೆ ಅಂಟುವ ಏಫಿಡ್ಡುಗಳನ್ನು ತಿನ್ನುವ ಕ್ರೈಸೋಪ.                                                           			(ಪಿ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ